
ಪುಸ್ತಕ ಮೇಳ ೨೦೧೦
=============
ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬೆರ್ ೧೨ ಇಂದ ೨೧ ರವರೆಗು ಹತ್ತು ದಿನಗಳ ಕಾಲ ಆಯೊಜಿಸಲಾಗಿದ್ದ "ಪುಸ್ತಕ-ಮೇಳ -೨೦೧೦" ಯಶಸ್ವಿಯಾಗಿ ಪೂರ್ಣಗೊಂಡಿದ್ದು ನಮಗೆ ತಿಳಿದ ವಿಷಯವಾದರೂ, ನಾನು ಅಲ್ಲಿ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾ ಬರೆದ ಬರವಣಿಗೆ ಇದಾಗಿದೆ. ಈ ಬಾರಿಯ ಪುಸ್ತಕ ಮೇಳ ದೇಶದ ಎರಡನೆಯ ದೊಡ್ಡ ಪುಸ್ತಕ ಹಬ್ಬ ಆಗಿತ್ತು, ಸುಮಾರು ೩೦೦ ಮಳಿಗೆಗಳಿಂದ ಕೂಡಿತ್ತು. ಸುಮಾರು ೭೦ ಲಕ್ಷ ಪುಸ್ತಕಗಳು ಪ್ರದರ್ಶನ ಮತ್ತು ಮಾರಾಟಕಿದ್ದವು. ದೇಶದ ನಾನಾ ಭಾಗಗಳಿಂದ ಬಂದಿದ್ದ ವಿವಿಧ ಮುದ್ರಕರು, ಪ್ರಕಾಶಕರು ಕನ್ನಡ, ಇಂಗ್ಲೀಶ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ಪುಸ್ತಕಗಳನ್ನು ತಮ್ಮದೇ ಆದ ಶೈಲಿಯಲ್ಲಿ ಜೋಡಿಸಿ ಇಟ್ಟಿದ್ದು ಕಂಡು ಬಂತು.
ಕಳೆದ ಬಾರಿ ನಡೆದ ಪುಸ್ತಕ ಮೇಳದಲ್ಲಿ ನಗದು(cash) ತಗೆದುಕೊಂಡು ಹೋಗದೇ, ಅಲ್ಲಿ ATM ಗಾಗಿ ಪೆಚಾಡಿದ ಘಟನೆಯನ್ನು ಮೊದಲೇ ನೆನಪಿಸಿಕೊಂಡು ನಗದು ಸಹಿತನಾಗಿ ನವೆಂಬೆರ್ ೧೩ರಂದು ನನ್ನ ಸ್ನೇಹಿತನ ಜೊತೆಗೆ ಮಧ್ಯಾನ್ನ ೧೨ ರ ಸುಮಾರಿಗೆ ಅರಮನೆ ಮೈದಾನಕ್ಕೆ ಹೋದೆ. ಕಳೆದ ಬಾರಿಗೆ ಹೋಲಿಸಿದರೆ ದೊಡ್ಡದಾಗಿ ಕಂಡು ಬಂತಾದರು ಕುಡಿಯುವ ನೀರು ಮತ್ತು ವಾಹನ ನಿಲುಗಡೆ ಸಮಸ್ಯೆಗಳು ಜೀವಂತವಾಗಿಯೇ ಇದ್ದವು. ಕನ್ನಡ ಪುಸ್ತಕ ಪ್ರಿಯರಿಗೆ ಇದು ವಿಶ್ವದ ದೊಡ್ಡ ಪುಸ್ತಕ ಮೇಳ ಅಂದರೆ ತಪ್ಪಾಗಲಾರದು, ಅಲ್ಲಿದ್ದ ಪುಸ್ತಕಗಳಲ್ಲಿ ಬಹುಪಾಲು ಕನ್ನಡದ ಪುಸ್ತಕಗಳೆ!. ಅವುಗಳಲ್ಲಿ ಕುವೆಂಪು, ಶಿವರಾಂಕಾರಂತ, ಭೈರಪ್ಪ, ಪೂರ್ಣಚಂದ್ರ ತೇಜಸ್ವಿ, ಬೀಚಿ, ರವಿ ಬೆಳೆಗೆರೆ, ಡಿವಿಜಿ ಮತ್ತು ಹಲವರು ರಚಿತ ಪುಸ್ತಕಗಳೆ ಬಹುಪಾಲು. ಸಾಹಿತ್ಯ, ನಾಟಕ, ಕಥೆ, ಕಾದಂಬರಿ, ವಿಮರ್ಶೆ ಕೃತಿಗಳು, ನಗೆಬರಹಗಳು, ಮಕ್ಕಳ ಪುಸ್ತಕಗಳು, ಧರ್ಮ ಶಾಸ್ತ್ರಗಳಾದ ಭಗವಧ್ಗಿತೆ, ರಾಮಾಯಣ, ಕುರಾನ್, ಮುಂತಾದವು ಕೂಡ ಕಂಡು ಬಂದವು. ಪುಸ್ತಕಗಳನ್ನು ನೋಡುತ್ತಾ ಹೋದ ನಾವು ಊಟದ ಪರಿವೆ ಇಲ್ಲದೆ ಪುಸ್ತಕಗಳನ್ನ ನೋಡುತ್ತಾ, ನೆಚ್ಚಿಗೆ ಆದ ಪುಸ್ತಕಗಳ ಪುಟಗಳನ್ನು ತಿರುವಿ ಹಾಕಿ ನೋಡುತ್ತಾ, ಕೊಳ್ಳಲೆ ಬೇಕೆಂಬ ಪುಸ್ತಗಳನ್ನ ಕೊಳ್ಳುತ್ತ ಸಾಗಿದೆವು.
ಮಧ್ಯಾನ್ನ ೨ ಗಂಟೆ ಸುಮಾರಿಗೆ ಪಕ್ಕದಲ್ಲೇ ಇದ್ದ ಕ್ಯಾಂಟೀನ್ನಲ್ಲೇ ಪುರಿ, ಅನ್ನ- ಸಾರು ಊಟ ಮಾಡಿ ಮತ್ತೆ ಉಳಿದ ಮಳಿಗೆಗೆ ಭೇಟಿ ನೀಡುತ್ತಾ ಸಾಗಿದೆವು. ಕಳೆದ ಬಾರಿ ಕೊಂಡಿದ್ದ ಪುಸ್ತಕಗಳನ್ನೆ ಪೂರ್ಣ ಓದಿ ಮುಗಿಸದ ನಾನು, ಆ ಪುಸ್ತಕಗಳ ಜೊತೆ ಇನ್ನೋಸ್ಟು ಪುಸ್ತಕಗಳನ್ನ ಕೊಂಡುಕೊಂಡೆ. ಅವುಗಲ್ಲಿ ಗಾಂಧಿಯ ಆತ್ಮಕಥೆಯೆಂದು ಕರಿಸಿಕೊಳ್ಳುವ "My experiments with truth", ಭೈರಪ್ಪ ಅವರ ಐಥಿಹಾಸಿಕ ಬರಹ "ಆವರಣ", ಕೆ. ಎಸ್. ನರಸಿಂಹಸ್ವಾಮಿಯವರ "ಮೈಸೂರು ಮಲ್ಲಿಗೆ", ಎನ್. ಎಸ್. ಲಕ್ಷ್ಮಿನಾರಾಯಣಭಟ್ಟ ಅವರ "ಭಾವ ಸಂಗಮ", ದಿ.ವಿ.ಜಿ.ಯ "ಸಂಸ್ಕೃತಿ" ಮತ್ತು ಸರ್ವಜ್ಞನ ವಚನಗಳು.
ಕಳೆದ ಬಾರಿ ಪುಸ್ತಕ ಮೇಳದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡೆ, ಆ ಬಾರಿಯೂ ನಾನು ಸ್ನೆಹಿತರೊಡನೆ ಹೋಗಿದ್ದೆ. ಪಾಕಶಾಸ್ತ್ರಲ್ಲಿ ಪಾಂಡಿತ್ಯವನ್ನು ಪಡೆಯ ಬೇಕೆಂಬ ಇಚ್ಛೆ ಉಳ್ಳವರಾದ ನಾವು, ಅಡುಗೆಯಲ್ಲಿ ಹೊಸತನ್ನು ಮಾಡಲು ಒಂದು ಒಳ್ಳೇ ಅಡುಗೆ ಮಾರ್ಗದರ್ಶಿ ಪುಸ್ತಕ ತಗೋಬೇಕು ಅಂತ ಹುಡುಕುತ್ತಿದ್ದಾಗ, ನಮಗೆ ಸಿಕ್ಕಿದ್ದು "ಅಮ್ಮ ಅಡುಗೆ" ಎಂಬ ಪುಸ್ತಕ, ಅದರಲ್ಲಿ ತುಂಬಾ ಅಡುಗೆಗಳ ತಯಾರಿಕೆ ವಿಧಾನದ ಬಗ್ಗೆ ಚಿತ್ರಸಹಿತ ಮಾಹಿತಿ ಇತ್ತು. ಆ ಪುಸ್ತಕ ಕೊಂಡ ಮೇಲೆ ನನ್ನ ಸ್ನೇಹಿತ ಹೇಳಿದ ಇದು ಅಮ್ಮ ಅಡುಗೆ ಪುಸ್ತಕ ಆಗಿರೋದಕ್ಕೆ ಇದರಲ್ಲಿ ಹೆಚ್ಚು ಅಡುಗೆಗಳ ಮಾಹಿತಿ ಇದೆ. ಇಡೀ ಪುಸ್ತಕ ಮೇಳದಲ್ಲಿ ಹುಡುಕಿದರು ನಮಗೆ "ಹೆಂಡತಿ ಅಡುಗೆ" ಅನ್ನೋ ಪುಸ್ತಕ ಸಿಗಲ್ಲ, ಅದನ್ನ ಅಪ್ಪಿ-ತಪ್ಪಿಯಾರಾದರೂ ಬರೆದರು ಕೂಡ ಅದು ಮಗ್ಗಿ ಪುಸ್ತಕದ ತರ ೬-೭ ಪುಟದ್ದು ಆಗಿರುತ್ತೆ ಅಂತ ಹೇಳಿದ್ದನ್ನ ಕೇಳಿ ನಾವು ಬಿಡದೆ ನಕ್ಕಿದ್ದು ನೆನಪಿಗೆ ಬಂತು.
ಅದೇನೇ ಇರಲಿ ಮನುಷ್ಯನ ವಿಕಾಸಕ್ಕೆ, ಜ್ಞಾನಾರ್ಜನೆಗೆ ಮತ್ತು ಪಾಂಡಿತ್ಯಕ್ಕೆ ಪುಸ್ತಕಗಳು ಅಗತ್ಯ ಮತ್ತು ಅದಕ್ಕೆ ಪೂರಕವಾಗಿ ಇಂಥ ಪುಸ್ತಕ ಮೇಳಗಲು ಹೆಚ್ಚು ಹೆಚ್ಚು ಎಲ್ಲಾ ಕಡೆ ನಡಿಯಲಿ ಅಂತ ಅಶಿಸುತ್ತ ಪುಟ್ಟ ಬರವಣಿಗೆಯನ್ನ ಮುಗಿಸುತ್ತೇನೆ.
